Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕರ್ನಾಟಕದಲ್ಲಿ ಕನ್ನಡ ಮಾತನಾಡುವ ಅನಿವಾರ್ಯತೆ ಸೃಷ್ಟಿಸಬೇಕು

ಸುದ್ದಿಮೂಲ ವಾರ್ತೆ

ಬೆಂಗಳೂರು, ಅ. 17: ಹೊರರಾಜ್ಯಗಳಿಂದ ಇಲ್ಲಿಗೆ ಬಂದವರಿಗೆ ಕನ್ನಡವನ್ನೇ ಮಾತನಾಡುವಂತಹ ಅನಿವಾರ್ಯತೆಯನ್ನು ಸೃಷ್ಟಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಇಂದು ಆಯೊಜಿಸಿದ್ದ 'ಕರ್ನಾಟಕ ಸಂಭ್ರಮ 50-ರ ಲಾಂಛನ' ಬಿಡುಗಡೆ ಮಾಡಿ ಅವರು ಮಾತನಾಡಿದರು.

ನಾವೆಲ್ಲರೂ ಕನ್ನಡಿಗರು, ಕರ್ನಾಟಕದ ಏಕೀಕರಣವಾದಾಗಿನಿಂದ ವಿವಿಧ ಭಾಷೆಗಳನ್ನು ಮಾತನಾಡುವ ಜನರು ಕನ್ನಡ ನಾಡಿನಲ್ಲಿ ನೆಲೆಸಿದ್ದಾರೆ. ಈ ನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರೂ ಕೂಡ ಕನ್ನಡ ಭಾಷೆ ಮಾತನಾಡುವುದನ್ನು ಕಲಿಯಬೇಕು. ತಮಿಳುನಾಡು, ಕೇರಳ, ತೆಲಂಗಾಣ, ಉತ್ತರಪ್ರದೇಶ ರಾಜ್ಯಗಳಲ್ಲಿ ಅಲ್ಲಿನ ಭಾಷೆ ಕಲಿಯದೇ ಕನ್ನಡ ಮಾತನಾಡಿಕೊಂಡು ಬದುಕಲು ಸಾಧ್ಯವಿಲ್ಲ. ಆದರೆ ಕರ್ನಾಟಕದಲ್ಲಿ ಕನ್ನಡ ಬಾರದೇ ಇದ್ದರೂ ಬದುಕಬಹುದು. ಇದೇ ನಮ್ಮ ರಾಜ್ಯಕ್ಕೂ ಹಾಗೂ ಪಕ್ಕದ ರಾಜ್ಯಗಳಿಗೂ ಇರುವ ವ್ಯತ್ಯಾಸ ಎಂದರು.

ಕನ್ನಡಿಗರಲ್ಲಿ ಉದಾರತೆ ಜಾಸ್ತಿ. ಅವರು ಇಂಗ್ಲಿಷ್‌ನಲ್ಲಿ ಮಾತನಾಡಿದರೆ ಇಂಗ್ಲಿಷ್, ಹಿಂದಿಯಲ್ಲಿ ಮಾತನಾಡಿದರೆ ಹಿಂದಿ ಹೀಗೆ ಅವರದ್ದೇ ಭಾಷೆಯಲ್ಲಿ ಮಾತನಾಡುವ ಮೂಲಕ ಅವರಿಗೂ ಕನ್ನಡ ಕಲಿಸಬೇಕು ಎಂಬುದನ್ನು ಮರೆಯುತ್ತಾರೆ. ಇಂತಹ ಇಂತಹ ಅಭಿಮಾನ ಶೂನ್ಯತೆಯನ್ನು ಬಿಟ್ಟು ಕರ್ನಾಟಕದಲ್ಲಿ ಕನ್ನಡವನ್ನು ಮಾತನಾಡುವಂತಹ ವಾತಾವರಣ, ಕನ್ನಡದ ಅನಿವಾರ್ಯತೆಯನ್ನು ಸೃಷ್ಟಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕರ್ನಾಟಕದ ಏಕೀಕರಣವಾಗಿ 68 ವರ್ಷಗಳು ಸಂದರೂ , ರಾಜ್ಯದಲ್ಲಿ ಕನ್ನಡದ ವಾತಾವರಣವನ್ನು ನಿರ್ಮಿಸಲು ಸಾಧ್ಯವಾಗದಿರುವುದು ಸರಿಯಲ್ಲ. ಕನ್ನಡಿಗರ ಈ ವರ್ತನೆ ಭಾಷಾ ಬೆಳವಣಿಗೆ ಹಾಗೂ ನಾಡು, ನುಡಿ, ಸಂಸ್ಕೃತಿ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯದಲ್ಲ. ರಾಜ್ಯದ ಕೆಲವು ಭಾಗಗಳಲ್ಲಿ ಪರಭಾಷಿಗರು ಕನ್ನಡವನ್ನು ಮಾತನಾಡುವುದೇ ಇಲ್ಲ. ಕನ್ನಡಿಗರು ಅಭಿಮಾನ ಶೂನ್ಯರಲ್ಲ. ಆದರೆ ಹೆಚ್ಚಿನ ಉದಾರತೆಯಿಂದಾಗಿ ಈ ರೀತಿ ಆಗಿದೆ. ಬೇರೆ ಭಾಷಿಗರನ್ನು , ಧರ್ಮದವರನ್ನೂ ಪ್ರೀತಿಸಬೇಕು ಆದರೆ ನಮ್ಮ ಭಾಷೆಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ನಮ್ಮಲ್ಲಿ ಇಂಗ್ಲಿಷ್ ವ್ಯಾಮೋಹವೂ ಹೆಚ್ಚಾಗಿದೆ. ನನ್ನ ಮಂತ್ರಿಮಂಡಲದ ಹಲವರು ಹಾಗೂ ವಿಶೇಷವಾಗಿ ಅಧಿಕಾರಿಗಳು ಕಡತಗಳಲ್ಲಿ ಇಂಗ್ಲಿಷ್‌ನಲ್ಲಿಯೇ ಟಿಪ್ಪಣಿಯನ್ನು ಬರೆಯುತ್ತಾರೆ. ಕೇಂದ್ರ ಸರ್ಕಾರಕ್ಕೆ ಹಾಗೂ ಇತರೆ ರಾಜ್ಯಗಳಿಗೆ ಬರೆಯುವ ಸಂದರ್ಭದಲ್ಲಿ ಇಂಗ್ಲಿಷ್ ಬಳಸಬಹುದೇ ಹೊರತು , ಇನ್ನುಳಿದಂತೆ ಕನ್ನಡದಲ್ಲಿಯೇ ವ್ಯವಹರಿಸಬೇಕು. ಬಹಳ ವರ್ಷಗಳಿಂದ ಕನ್ನಡವನ್ನು ಆಡಳಿತ ಭಾಷೆಯಾಗಿದ್ದರೂ ಕೂಡ ಇದು ಪಾಲನೆಯಾಗದಿರುವುದಕ್ಕೆ ನಿರ್ಲಕ್ಷ್ಯವೂ ಕಾರಣವಿರಬಹುದು. ಈ ಪರಿಸ್ಥಿತಿ ಸುಧಾರಿಸಬೇಕು ಎಂದರು.

ಹಿಂದಿನ ಸರ್ಕಾರ ಆಚರಿಸಬೇಕಿತ್ತು

ನವೆಂಬರ್ 01, 2023 ಕ್ಕೆ 50 ವರ್ಷಗಳು ತುಂಬುತ್ತದೆ. ವಾಸ್ತವವಾಗಿ ಕಳೆದ ವರ್ಷವೇ ಇದನ್ನು ಆಚರಿಸಬೇಕಿತ್ತು. ಆದರೆ ಹಿಂದಿನ ಸರ್ಕಾರದವರು ಮಾಡಿಲ್ಲ. ಈ ಬಾರಿಯ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಇದೊಂದು ಮಹತ್ವದ ಘಟನೆ. ಇದನ್ನು ವಿಶೇಷವಾಗಿ ಆಚರಿಸದೇ ಹೋದರೆ ಲೋಪವಾಗುತ್ತದೆ ಎಂದು ತೀರ್ಮಾನಿಸಿ, ಬಜೆಟ್ ನಲ್ಲಿ ಘೋಷಣೆ ಮಾಡಿ 2023 ನವೆಂಬರ್ 1 ರಿಂದ 2024 ನವೆಂಬರ್ 1 ರವರೆಗೆ ವರ್ಷವಿಡೀ ಕರ್ನಾಟಕ ಸಂಭ್ರಮವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಕರ್ನಾಟಕಕ್ಕೆ 50 ವರ್ಷ ಎಂಬುದು ಕೇವಲ ಸರ್ಕಾರಿ ಕಾರ್ಯಕ್ರಮ ಅಲ್ಲ. ಇದು ಕನ್ನಡಿಗರ ಕಾರ್ಯಕ್ರಮ ಆಗಬೇಕು. ಪ್ರತಿ ಹಳ್ಳಿ ಹಳ್ಳಿಯಲ್ಲಿಯೂ ಸಹ ಜನರು ಸಂಭ್ರಮದಿಂದ ಈ ವರ್ಷ ಪೂರ್ತಿ ಕನ್ನಡದ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಹೇಳಿದರು.

ಕನ್ನಡ ರಥಯಾತ್ರೆ:

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಕರ್ನಾಟಕಕ್ಕೆ 50 ವರ್ಷ ಸಂದಿರುವ ಸಂದರ್ಭದಲ್ಲಿ ಈಗಾಗಲೇ ನಾಲ್ಕೂ ವಿಭಾಗಗಳಲ್ಲಿ ಸಾಹಿತಿಗಳು, ಹೋರಾಟಗಾರರು ಮತ್ತು ಕನ್ನಡಪರ ಮನಸ್ಸು ಇವವರೊಂದಿಗೆ ಸಭೆ ನಡೆಸಲಾಗಿದೆ. ಅವರೆಲ್ಲರೂ ಒಂದು ಲಾಂಛನ ಬಿಡುಗಡೆ ಮಾಡಿ ಎಂದು ಸಲಹೆ ಮಾಡಿದ್ದರು. ಅದರಂತೆ ಇಂದು ಲಾಂಛನ ಅನಾವರಣಗೊಳಿಸಲಾಗಿದೆ ಎಂದರು.

ನ.1ರಿಂದ ಮುಂದಿನ ವರ್ಷ 2024ರ ನ.1ರವರೆಗೆ ರಾಜ್ಯದಾದ್ಯಂತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮುಖ್ಯವಾಗಿ 50 ವರ್ಷಗಳ ಹಿಂದೆ ಕರ್ನಾಟಕ ಎಂದು ನಾಮಕರಣ ಮಾಡಿದಾಗ ಆಗ ದೇವರಾಜ ಅರಸು ಅವರು ಹಂಪಿಯಿಂದ ಗದಗವರೆಗೆ ಕನ್ನಡದ ರಥಯಾತ್ರೆ ಮಾಡಿದ್ದರು. ಅದೇ ಮಾದರಿಯಲ್ಲಿ ನ.2ರಂದು ಹಂಪಿಯಲ್ಲಿ ರಥಯಾತ್ರೆ ಆರಂಭಿಸುವ ಮೂಲಕ ಗದಗ ತಲುಪಿ, ಅಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಸನ್ಮಾನ ಮಾಡಲಾಗುತ್ತದೆ. ಇದಲ್ಲದೆ, ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಸಚಿವ ಎಚ್.ಕೆ. ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಕೆ.ಗೋವಿಂದರಾಜು, ನಾಗರಾಜ್ ಯಾದವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಎನ್. ಮಂಜುಳ, ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ ಉಪಸ್ಥಿತರಿದ್ದರು.

ಲಾಂಛನದ ವಿನ್ಯಾಸಕ್ಕೆ ಮೆಚ್ಚುಗೆ

ಕರ್ನಾಟಕ ಸಂಭ್ರಮ- 50 ಲಾಂಛನವನ್ನು ವಿನ್ಯಾಸಗೊಳಿಸಿದ ರವಿರಾಜ್.ಜಿ.ಹುಲಗೂರು ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕನ್ನಡ ಮತ್ತಿ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಲಾಂಛನ ನೀಡುವಂತೆ ಸಾರ್ವಜನಿಕರಿಂದ ಆಹ್ವಾನಿಸಲಾಗಿತ್ತು. ಅಂತಿಮವಾಗಿ 271 ಲಾಂಛನಗಳನ್ನು ಸ್ಪರ್ಧೆಗೆ ಪರಿಗಣಿಸಲಾಗಿತ್ತು. ಅದರಲ್ಲಿ ರವಿರಾಜ್ ರಚಿಸಿದ ಲಾಂಛನ ಅಂತಿಮವಾಗಿ ಆಯ್ಕೆಯಾಗಿದೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ರವಿರಾಜ್ ಅವರಿಗೆ 25 ಸಾವಿರ ರೂ. ನಗದು ನೀಡಿ ಸನ್ಮಾನಿಸಿದರು. ಡಿಸಿಎಂ ಡಿ.ಕೆ. ಶಿವಕುಮಾರ್, ಈ ಮೊತ್ತ ಅತ್ಯಲ್ಪವಾಯಿತು. ಬಿಬಿಎಂಪಿಯಿಂದ ಮತ್ತೆ 1 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ವೇದಿಕೆಯಲ್ಲಿ ಪ್ರಕಟಿಸಿದರು.

 

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ