Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬೆಂಗಳೂರು ಬಂದ್‌ ಹಿಂಪಡೆದ ಖಾಸಗಿ ಸಾರಿಗೆ ಒಕ್ಕೂಟ

ಸುದ್ದಿಮೂಲ ವಾರ್ತೆ

ಬೆಂಗಳೂರು, ಸೆ. 11: ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆಗಳಿಗೆ ಹೊಡೆತ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ನಗರ ಬಂದ್ ಕರೆ ನೀಡಿತ್ತು. ಆದರೆ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮನವಿ ಮಾಡಿ, ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ಬಳಿಕ ಖಾಸಗಿ ಸಾರಿಗೆ ಒಕ್ಕೂಟ ಬಂದ್ ಹಿಂಪಡೆದಿದೆ.



ಮುಷ್ಕರನಿರತ ಸ್ವಾತಂತ್ರ್ಯ ಉದ್ಯಾನಕ್ಕೆ ಆಗಮಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಈಡೇರಿಸಲು ಸಾಧ್ಯವಿರುವ ಬೇಡಿಕೆಗಳನ್ನು ಮಂಗಳವಾರದ ವೇಳೆಗೆ ಜಾರಿಗೊಳಿಸುವ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ. ಚಾಲಕರ ‍ಶ್ರೇಯೋಭಿವೃದ್ಧಿಗಾಗಿ ನಿಗಮ ರಚನೆ, ಚಾಲಕರಿಗೆ ಸಾಲ ಸೌಲಭ್ಯ, ಮತ್ತಿತರ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದರು.

ಬೈಕ್‌ ಟ್ಯಾಕ್ಸಿ ನಿಷೇಧಿಸುವುದು ಸೇರಿದಂತೆ ಇತರೆ ಹಲವು ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಾರಿಗೆ ಒಕ್ಕೂಟದ ಪ್ರತಿನಿಧಿಗಳು ಮಂಗಳವಾರದ ವೇಳೆಗೆ ಬೇಡಿಕೆ ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಬೇಕು. ಇಲ್ಲವಾದಲ್ಲಿ ರಸ್ತೆ ತೆರಿಗೆ ರದ್ದುಪಡಿಸಬೇಕು. ರ್‍ಯಾಪಿಡೊ ಬೈಕ್ ಟ್ಯಾಕ್ಸಿ ನಿಷೇಧಿಸುವ ಜೊತೆಗೆ ಖಾಸಗಿ ವಾಹನ ಚಾಲಕರಿಗೆ ಮಾಸಿಕ 10 ಸಾವಿರ ಸಹಾಯಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ನಗರದಲ್ಲಿ ನಡೆಸಿದ ಬೆಂಗಳೂರು ಬಂದ್ ಬಹುತೇಕ ಯಶಸ್ವಿಯಾಯಿತು. ಸರ್ಕಾರ ಕೆಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದೆ.

ಬಂದ್ ನಿಂದಾಗಿ ನಗರದೆಡೆ ಹಲವೆಡೆ ಪ್ರಯಾಣಿಕರು ಪರದಾಡಿದರೆ, ಬಂದ್ ನಿರ್ಲಕ್ಷಿಸಿ ಸಂಚರಿಸಿದ ಖಾಸಗಿ ವಾಹನಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿ ಮುಷ್ಕರ ನಿರತರು ದೂಂಡಾವರ್ತನೆ ತೋರಿದರು. ಚಾಲಕರ ಮೇಲೆ ಹಲ್ಲೆ, ಕಾನೂನ ಕೈಗೆತ್ತಿಕೊಂಡು ರಂಪಾಟ ಮಾಡಿದರು.

ರಸ್ತೆ ತಡೆಗೆ ಅಡ್ಡಿಪಡಿಸಲು ಬಂದ ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದರು. ಬಂದ್ ಬೆಂಬಲಿಸಿ ನಗರ ಸೇರಿ ವಿವಿಧ ಭಾಗಗಳಿಂದ ಬಂದಿದ್ದ ಖಾಸಗಿ ವಾಹನಗಳ ಚಾಲಕರು ಮಾಲೀಕರು ಮೆರವಣಿಗೆ ನಡೆಸಿ ಫ್ರಿಡಂಪಾರ್ಕ್ ನಲ್ಲಿ ಸಮಾವೇಶಗೊಂಡು ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯಿಂದಾಗಿ ನಗರದ ಹಲವೆಡೆ ವಾಹನ ಸಂಚಾರ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.

ರಸ್ತೆಗಿಳಿಯದ ಲಕ್ಷಾಂತರ ವಾಹನಗಳು

ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಸುಮಾರು 4 ಲಕ್ಷ ಆಟೋ, 2 ಲಕ್ಷ ಟ್ಯಾಕ್ಸಿ, 30 ಸಾವಿರ ಗೂಡ್ಸ್ ವಾಹನಗಳು, 8 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನಗಳು, 90 ಸಾವಿರ ಸಿಟಿ ಟ್ಯಾಕ್ಸಿ, ಕಾರ್ಪೊರೇಟ್ ಕಂಪನಿ ಬಸ್‌ಗಳು ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ಇದರಿಂದ ನಗರದಲ್ಲಿ ಸಂಚರಿಸುವ ದೂರ ದೂರಗಳಿಗೆ ಹೋಗುವ ಪ್ರಯಾಣಿಕರು ಪರದಾಡುವಂತಾಗಿತ್ತು,ಕ್ಯಾಬ್ ಇಲ್ಲದೇ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಬಿಎಂಟಿಸಿ ಬಸ್ ನಲ್ಲಿ ಮನೆಗೆ ತೆರಳಿ ಸರಳತೆ ಮೆರೆದು ವಿಶೇಷವಾಗಿತ್ತು.

ಓಲಾ, ಉಬರ್ ಆಟೋ ಟ್ಯಾಕ್ಸಿ ಸಂಚಾರ ಸ್ಥಗಿತಗೊಂಡರೆ, ಕಾರ್ಪೊರೇಟ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಬಸ್‌ಗಳು ಕೂಡ ಮುಷ್ಕರಕ್ಕೆ ಬೆಂಬಲ ಸೂಚಿಸಿರುವುದರಿಂದ ಖಾಸಗಿ ಹಾಗೂ ಸರ್ಕಾರಿ ಕಚೇರಿಗಳ ಉದ್ಯೋಗಿಗಳ ಹಾಜರಾತಿ ಕಡಿಮೆಯಾಗಿತ್ತು.

ಕಚೇರಿಗಳಲ್ಲಿ ಹಾಜರಾತಿ ಕಡಿಮೆ

ಖಾಸಗಿ ವಾಹನಗಳ ಮೂಲಕ ನೌಕರರು, ಕಾರ್ಮಿಕರು ತೆರಳುವ ಕಂಪನಿಗಳ ಕಚೇರಿಗಳು, ಐಟಿ ಬಿಟಿ ಕಂಪನಿಗಳು ಅದಕ್ಕೆ ಪೂರಕವಾದ ಕಂಪನಿಗಳ ಕಚೇರಿಗಳು, ಕಾರ್ಖಾನೆಗಳು, ಗಾರ್ಮೆಂಟ್ಸ್ ಗಳಲ್ಲಿ ಹಾಜರಾತಿ ತೀರಾ ಕಡಿಮೆಯಾಗಿರುವುದು ಕಂಡುಬಂದಿತು. ಖಾಸಗಿ ಸಾರಿಗೆ ಬಂದ್‌ನಿಂದಾಗಿ ಸಾರ್ವಜನಿಕರಿಗೆ ನಗರದಲ್ಲಿ ಪ್ರಯಾಣ ದುಸ್ತರವಾಗಿ ಪರಿಣಮಿಸಿತ್ತು. ಬಂದ್ ವೇಳೆ ಬೆಂಗಳೂರು ನಗರ ಹಾಗೂ ಹೊರವಲಯದ ಪ್ರಯಾಣಿಕರ ಅನುಕೂಲಕ್ಕಾಗಿ 500ಕ್ಕೂ ಬಿಎಂಟಿಸಿ ಬಸ್‌ಗಳು ಹೆಚ್ಚುವರಿಯಾಗಿ 4ಸಾವಿರ ಟ್ರಿಪ್ ಸಂಚರಿಸಿದರೂ ಪ್ರಯಾಣಿಕರ ಒತ್ತಡವನ್ನು ನಿಭಾಯಿಸುವುದು ಸಾಧ್ಯವಾಗಿಲ್ಲ.

ಪರದಾಡಿದ ಸಾರ್ವಜನಿಕರು

ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹಾಗೂ ಬೇಸರ ಹೊರಹಾಕಲು 40ಕ್ಕೂ ಹೆಚ್ಚು ಖಾಸಗಿ ಸಾರಿಗೆ ಸಂಘಟನೆಗಳು ಬೆಂಗಳೂರು ಬಂದ್ ಗೆ ಕರೆ ಕೊಟ್ಟಿದ್ದು ನಗರದಲ್ಲಿ ಆಟೋ, ಕ್ಯಾಬ್, ವ್ಯಾನ್, ಗೂಡ್ಸ್ ವಾಹನ ಸೇರಿದಂತೆ ಯಾವ ಖಾಸಗಿ ಸಾರಿಗೆ ವಾಹನವೂ ರಸ್ತೆಗೆ ಇಳಿದಿರಲಿಲ್ಲ.

ಮೆಜೆಸ್ಟಿಕ್, ಕೆಎಸ್ಆರ್ ಟಿಸಿ ಆಟೋ ನಿಲ್ದಾಣದಲ್ಲಿ ಒಂದು ಆಟೋ ಕೂಡ ಕಂಡು ಬರಲಿಲ್ಲ. ಮುಂಜಾನೆಯೇ ಬೇರೆ, ಬೇರೆ ಊರುಗಳಿಂದ ಮೆಜೆಸ್ಟಿಕ್ ಗೆ ಆಗಮಿಸುತ್ತಿರುವ ಜನರು ಆಟೋಗಳು ಇಲ್ಲದೆ ಬಿಎಂಟಿಸಿ ಬಸ್ ಗಳತ್ತ ಮುಖ ಮಾಡಿದ್ದಾರೆ. ಲಗೇಜ್ ಹೆಚ್ಚಾಗಿದ್ದು, ಬಸ್ ನಲ್ಲಿ ಹೋಗಲು ಆಗದೇ, ಆಟೋ ಬೇಕು ಎನ್ನುವ ಪ್ರಯಾಣಿಕರಿಗೆ ಭಾರಿ ಸಮಸ್ಯೆ ಎದುರಾಗಿದೆ.

ಟ್ರಾಫಿಕ್‌ ಜಾಮ್

ಮಡಿವಾಳದಿಂದ ಖಾಸಗಿ ವಾಹನ ಚಾಲಕರು ರ್ಯಾಲಿ ಹೊರಟು ಫ್ರೀಡಂಪಾರ್ಕ್‌ ನಲ್ಲಿ ಪ್ರತಿಭಟನೆ ನಡೆಸಿದರು. ಗಡಿಭಾಗದಲ್ಲಿ ವಾಹನಗಳನ್ನು ತಡೆ ಹಿಡಿಯುತ್ತಿದ್ದವರನ್ನು ಪೋಲೀಸರು ನಿಯಂತ್ರಿಸಲು ಮುಂದಾದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೋಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ವಾಹನಗಳನ್ನು ತಡೆದರೆ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.

ಖಾಸಗಿ ಸಾರಿಗೆ ಒಕ್ಕೂಟದಿಂದ ಮುಷ್ಕರಕ್ಕೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪ್ರಿಪೇಯ್ಡ್ ಆಟೋ, ಕ್ಯಾಬ್ ಚಾಲಕರ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರಿಂದ ಪ್ರಿಪೇಯ್ಡ್ ಆಟೋ ಬಂದ್ ಆಗಿ ಪ್ರಯಾಣಿಕರು ಪರದಾಡುವಂತಾಗಿತ್ತು.

‌ಮೊಟ್ಟೆ ಎಸೆತ

ಬಂದ್‌ಗೆ ಬೆಂಬಲ ನೀಡದೇ ರಸ್ತೆಗಿಳಿದ ಕ್ಯಾಬ್‌ಗೆ ಚಾಲಕರಿಗೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಹೆಬ್ಬಾಳದಲ್ಲಿ ನಡೆದಿದೆ. ಜಾಲಹಳ್ಳಿ ಕ್ರಾಸ್ ಬಳಿ ಆಟೋ ಚಾಲಕರು ವಾಹನಗಳನ್ನು ತಡೆಯುತ್ತಿದ್ದಾರೆ. ಬಾಡಿಗೆ ಹೊಡೆಯುತ್ತಿದ್ದ ಆಟೋ, ಕ್ಯಾಬ್‌ಗಳನ್ನು ತಡೆದು ಚಾಲಕರಿಗೆ ತರಾಟೆಗೆ ತೆಗೆದುಕೊಂಡರು.

ಕಲಾಸಿಪಾಳ್ಯ ಸ್ಥಬ್ಧ

ಮುಷ್ಕರ ಹಿನ್ನೆಲೆಯಲ್ಲಿ ಕಲಾಸಿಪಾಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ 250ಕ್ಕೂ ಹೆಚ್ಚು ಬಸ್‌ಗಳು ರಸ್ತೆಗೆ ಇಳಿದಿಲ್ಲ.ಶಕ್ತಿ ಯೋಜನೆಯಿಂದ ಖಾಸಗಿ ಬಸ್‌ಗೆ ಭಾರಿ ಹೊಡೆತ ಬಿದ್ದಿದೆ ಎಂದು ಖಾಸಗಿ ಬಸ್ ಮಾಲಿಕರು ಮತ್ತು ಚಾಲಕರು ಅಳಲು ತೋಡಿಕೊಂಡರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ